DR. MUDNAKUDU
CHINNASWAMY

×
Home Works News Literature Gallery About Me Contact

Welcome to Dr. Mudnakudu Chinnaswamy’s Web Portal

ಡಾ. ಮೂಡ್ನಾಕೂಡು ಚಿನ್ನಾಸ್ವಾಮಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಳಹಿನ ಕವಿಯಾಗಿ ಬುದ್ಧನ ಮಾರ್ಗದಲ್ಲಿ ಹೊಸ ದಾರಿಗಳನ್ನು ಕ್ರಮಿಸುತ್ತಾ ಬಂದವರು. ಶಮಗುಣದ ಮಂದಸ್ಮಿತ, ಅನ್ವೇಷಣೆಯ ಕಣ್ಣೋಟ, ಸಮುದಾಯವನ್ನು ಸೇರಿಸಿಕೊಂಡು ಪ್ರಶಾಂತವಾಗಿ ನಡೆಯುವ ದಿಟ್ಟ ಹೆಜ್ಜೆ ಇವೆಲ್ಲ ಮೂಡ್ನಾಕೂಡು ಬದುಕು ಬರಹಗಳಲ್ಲಿ ಕಾಣುವ ಜಲಚಿಹ್ನೆಗಳು. ಕವನ, ಕಥೆ, ನಾಟಕ, ವ್ಯಕ್ತಿ ಚಿತ್ರ, ಚಿಂತನ, ಅನುವಾದ, ಸಂಪಾದನೆ ಹೀಗೆ ಎಲ್ಲೆಲ್ಲಿ ಹೆಜ್ಜೆ ಇಟ್ಟರೂ ಅಲ್ಲೆಲ್ಲ ಬಹುರೂಪಿಯಾಗಿ ನೊಂದವರ ನೋವು ಚಂದಿರನ ಕಣ್ಣಾಗಿ, ಹಿಂಗಲಾರದ ಹುಣ್ಣಾಗಿ ಬೆಳೆಯುತ್ತ ಅಂತಿಮವಾಗಿ ಬೋಧಿವೃಕ್ಷವಾಗಿ ಚಾಚಿಕೊಳ್ಳುವ ಸಂಕಥನ ಒಂದು ಅದ್ಭುತ ರೂಪಕ. ಅಂಬೇಡ್ಕರ್ ಬದುಕು ಮತ್ತು ಬರಹಗಳು ಕೊಡುವ ರೂಪಕದ ರೂಪಾಂತರಗಳು ಮೂಡ್ನಾಕೂಡು ಅವರ ಬರಹಗಳಲ್ಲಿ. ಕನ್ನಡದ ಮಣ್ಣಿನಲ್ಲಿ ಕಣ್ಣು ಕಿವಿ ಮೂಗುಗಳಿಗೆ ಹೊಸ ಅನುಭವವನ್ನು ಕೊಡುತ್ತವೆ. ಚಪ್ಪಲ್ಲಿಯಿಂದ ಬೋಧಿವೃಕ್ಷದವರೆಗೆ ದುಃಖದ ನೋವು ಮತ್ತು ಆನಂದದ ಶಾಂತಸ್ಠಿತಿಯವರೆಗಿನ ಬಹುರೂಪಿ ಚಿಂತನಾವಿನ್ಯಾಸಗಳು ಮೂಡ್ನಾಕೂಡು ಬರಹಗಳು ಅನನ್ಯತೆಯನ್ನು ಪ್ರಕಟಿಸುತ್ತವೆ.

ಮೈಸೂರು, ಚಾಮರಾಜನಗರ ಮತ್ತು ಗುಲ್ಬರ್ಗಾಗಳಲ್ಲಿ ನಡೆದ ಮೂಡ್ನಾಕೂಡು ಸಾಹಿತ್ಯ ಮಂಥನಗಳು, ಸ್ಪಂದನ ಪ್ರತಿಸ್ಪಂದನಗಳೊAದಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಸಾಹಿತ್ಯದ ಅನುಸಂಧಾನ ನಡೆಸಿದ ಭಿನ್ನ ಚಿಂತನೆಯ ಲೇಖನಗಳು ಇಲ್ಲಿ ಆಯ್ಕೆಗೊಂಡಿವೆ. ಜೊತೆಗೆ ಚಿನ್ನಾಸ್ವಾಮಿ ಅವರ ವ್ಯಕ್ತಿತ್ವ ಮತ್ತು ಅವರ ಜೊತೆಗಿನ ಸಂದರ್ಶನ ಹಾಗೂ ಅವರನ್ನು ಕುರಿತ ಇಂಗ್ಲೀಷ್ ಲೇಖನಗಳು ಕೂಡ ಮುಡ್ನಾಕೂಡು ಅನುಸಂಧಾನಕ್ಕೆ ಹೆಚ್ಚಿನ ವ್ಯಾಪಕತೆಯನ್ನು ತಂದುಕೊಟ್ಟಿವೆ. ಹಿರಿಯ ಸಂಶೋಧಕ, ಕವಿ ಡಾ. ಎಲ್. ಬಸವರಾಜು ಅವರು ‘ಅವರ ಮಾತೆಲ್ಲ ಚಿನ್ನ-ಸ್ವಾಮಿ' ಎಂದಿರುವAತೆ ಸಂಯಮ, ಪಕ್ವತೆಯ ಅಭಿವ್ಯಕ್ತಿ, ಪ್ರೀತಿಯ ಒಳಗೊಳ್ಳುವಿಕೆ ಇಪ್ಪತ್ತೊಂದನೇ ಶತಮಾನಕ್ಕೆ, ನವಬೌದ್ಧಿಕ ಜಗತ್ತಿಗೆ ನವಬುದ್ಧತ್ವದ ಬೆಳಕಾಗಿ ಮೂಡ್ನಾಕೂಡು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಅಧ್ಯಯನ ಸಂತೋಷವನ್ನು ಕೊಡುತ್ತದೆ. ಹೀಗಾಗಿ ಸಾಂಪ್ರದಾಹಿಕ ವಿಚಾರ ಸಂಕಿರಣಗಳ ಲೇಖನಗಳಿಗಿಂತ ಬೇರೆಯಾಗಿ ಆಪ್ತತೆ, ಆತ್ಮೀಯತೆಯ ಅವರಣವೊಂದರ ಸೃಷ್ಟಿ ಈ ಗ್ರಂಥದ ಓದಿನಿಂದ ದೊರೆಯುತ್ತದೆ. ಸಾರಿಗೆಯ ಬಸ್ಸಿನಲ್ಲಿ ಕಿರುವಿಶ್ವದ ಗದ್ದಲದ ನಡುವೆ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಕವನಗಳ ನಾದಲೀಲೆಯಂತೆ ಇಪ್ಪತ್ತೊಂದನೇ ಶತಮಾನದ ಜಾಗತೀಕರಣದ ಭೋಗ- ಹಿಂಸೆಯ ಅರ್ಭಟದ ನಡುವೆ ಮೂಡ್ನಾಕೂಡು ಚಿನ್ನಾಸ್ವಾಮಿ ಅವರ ಕವನಗಳು ಮತ್ತು ಸಾಹಿತ್ಯ ನಮಗಾಗಿ ಪುಟ್ಟ ‘ವಿಹಾರ' ವೊಂದನ್ನು ನಿರ್ಮಿಸುತ್ತವ.


ಡಾ. ಬಿ. ಎ. ವಿವೇಕ ರೈ
(ಬಯಲ ಬೆಳಕು ಕೃತಿಯ ಮುನ್ನುಡಿಯಿಂದ)

Books