DR. MUDNAKUDU
CHINNASWAMY

×
Home Works News Literature Gallery About Me Contact

ಪರಿಚಯ

ಮೂಡ್ನಾಕೂಡು ಚಿನ್ನಸ್ವಾಮಿ

ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (೧೯೫೪) ಕನ್ನಡದ ಹಿರಿಯ ಕವಿ, ಲೇಖಕ ಹಾಗೂ ಚಿಂತಕರು. ಎಂ.ಕಾಂ., ಎಂ.ಎ. (ಕನ್ನಡ), ಡಿ.ಲಿಟ್. ಪದವೀಧರರಾದ ಇವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿರ್ದೇಶಕರು (ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರು ಹುದ್ದೆಯಿಂದ ಮಾರ್ಚ್ ೨೦೧೪ ರಲ್ಲಿ ನಿವೃತ್ತಿ ಹೊಂದಿರುತ್ತಾರೆ. ಏಪ್ರಿಲ್ ೨೦೧೫ ರಿಂದ ಮಾರ್ಚ ೨೦೧೭ ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೬-೧೭ ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರ ಪ್ರವೃತ್ತಿ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಚಾಚಿಕೊಂಡಿದೆ. ಇವರ ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ ೪೦ ಪುಸ್ತಕಗಳನ್ನು ಹೊರತಂದಿದ್ದಾರೆ. ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಬುದ್ಧ ಬೆಳದಿಂಗಳು ಪ್ರಮುಖ ಕವಿತಾ ಸಂಕಲನಗಳು. ಮೋಹದ ದೀಪ, ಪಾಪಪ್ರಜ್ಞೆ, ಕಥೆಗಳು. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಇವರ ಇತರ ಪ್ರಮುಖ ಗದ್ಯ ಕೃತಿಗಳು. ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಕೊಲಂಬಿಯಾ, ಇಸ್ರೇಲ್ ಹಾಗೂ ಆಸ್ಟ್ರಿಯಾ ದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೆನೆಜುಯೇಲಾ ದೇಶದ ಸರ್ಕಾರ ೨೦೦೫ ರಲ್ಲಿ ವಿಶ್ವ ಕಾವ್ಯ ಮಾಲೆ ಅಡಿಯಲ್ಲಿ ’ಪೊಯೆಮಾಸ್ - ಮೂಡ್ನಾಕೂಡು’ ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಇದಲ್ಲದೆ, ಎರ್‍ಬಾಚೆ ಪಬ್ಲಿಷರ್‍ಸ್ ಲಿವರ್‍ಪೂಲ್, ಬ್ರಿಟನ್ ಮತ್ತು ಯೋಡಾ ಪ್ರೆಸ್, ದೆಹಲಿ ಇವರು ’ಬಿಫೋರ್ ಇಟ್ ರೆಯಿನ್ಸ್ ಅಗೆಯ್ನ್’ ಎಂಬ ಇಂಗ್ಲಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದ್ದಾರೆ ಹಾಗೂ ಹಿಂದಿ, ಉರ್ದು, ತೆಲುಗು, ಮರಾಠಿ ಭಾಷಾಂತರಗೊಂಡ ಕವಿತಾ ಸಂಗ್ರಹಗಳೂ ಪ್ರಕಟಗೊಂಡಿವೆ. ಇವರ ಕವಿತೆಗಳು ಶಾಲಾಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಪಠ್ಯಗಳಾಗಿವೆ. ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಹಲವಾರು ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತಾವಾಚನ, ಪ್ರಬಂಧ ಮಂಡನೆ ಮಾಡಿರುತ್ತಾರೆ.

ಇವರು ರಂಗಾಯಣ ರೆಪರ್ಟರಿಗೆ ’ಬಹುರೂಪಿ’ ಎಂಬ ಕಾವ್ಯನಾಟಕವನ್ನು ರಚಿಸಿ ನಿರ್ದೇಶಿಸಿರುತ್ತಾರೆ. ಅಲ್ಲದೆ ಪೂಚಂತೇ ಅವರ ಕುರಿತ ’ಮಾಯಾಲೋಕ’ ಎಂಬ ಸಾಕ್ಷ್ಯಚಿತ್ರದಲ್ಲಿ ಕರ್ವಾಲೊ ಪಾತ್ರದಲ್ಲಿ ನಟಿಸಿದ್ದಾರೆ.